ಎಲಿಯಟ್, ಎಚ್ ಎಂ ಮತ್ತು ಡೌಸನ್, ಜಾನ್: (1808-53) ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಎಂಟು ಸಂಪುಟಗಳ ಆಧಾರ ಗ್ರಂಥವನ್ನು ರಚಿಸಿರುವ ಪ್ರಸಿದ್ಧ ವಿದ್ವಾಂಸರು. 

ಎಲಿಯಟ್ 1808ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ. ವಿಂಚೆಸ್ಟರ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಬ್ರಿಟಿಷ್ ಈಸ್ಟ್‌ ಇಂಡಿಯ ಕಂಪನಿಯ ನೌಕರನಾಗಿ ಬಂಗಾಳಕ್ಕೆ ಬಂದ. ಎರಡು ಬಾರಿ ವಿದೇಶೀವ್ಯವಹಾರಗಳ ಖಾತೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. 1849ರಲ್ಲಿ ಭಾರತ ಮುಸ್ಲಿಂ ಇತಿಹಾಸಕಾರರ ವಿವರವಾದ ಒಂದು ಪಟ್ಟಿಯನ್ನೂ ವಿಷಯ ಸೂಚಿಯೊಂದನ್ನೂ ಪ್ರಕಟಿಸಿದ. ಈತನ ಪ್ರಸಿದ್ಧ ಗ್ರ್ರಂಥವೆಂದರೆ ಹಿಸ್ಟರಿ ಆಫ್ ಇಂಡಿಯ ಆಸ್ ಟೋಲ್ಡ್‌ ಬೈ ಇಟ್ಸ್‌ ಓನ್ ಹಿಸ್ಟೋರಿಯನ್ಸ್‌. ಇದು ಅಮೂಲ್ಯ ಆಧಾರ ಗ್ರಂಥವೆನಿಸಿದೆ. ಈ ಗ್ರಂಥಕ್ಕಾಗಿ ಎಲಿಯಟ್ ಅನೇಕಾನೇಕ ಉರ್ದು, ಪಾರಸಿ ಮತ್ತು ಅರಬ್ಬೀ ಮೂಲ ಪ್ರತಿಗಳನ್ನು ಶೇಖರಿಸಿದ್ದಲ್ಲದೆ ಅವುಗಳ ಅಗತ್ಯ ಭಾಗಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದಾನೆ. ಈ ಮಹಾ ಸಂಪುಟದ ಮೊದಲ ಭಾಗ ಪ್ರಕಟವಾಗುವ ವೇಳೆಗೆ ಎಲಿಯಟ್ ಆಫ್ರಿಕದ ಗುಡ್ ಹೋಪ್ ಭೂಶಿರದಲ್ಲಿ ತನ್ನ 45ನೆಯ ವಯಸ್ಸಿನಲ್ಲಿ ಮರಣಹೊಂದಿದ (1853). 

ಗ್ರಂಥದ ಉಳಿದ ಕೆಲಸವನ್ನು ಪುರೈಸುವ ಜವಾಬ್ದಾರಿಯನ್ನು ಎಲಿಯಟ್ಟನ ಪತ್ನಿ ಜಾನ್ ಡೌಸನ್ನನಿಗೆ ವಹಿಸಿದಳು. ಡೌಸನ್ ಆಗ ಸ್ಯಾಂಡ್ಹಸಿರ್ಟ್‌ನ ಸೈನಿಕ ಶಾಲೆಯೊಂದರ ಪ್ರಾಧ್ಯಾಪಕನಾಗಿದ್ದ. ಈ ಮಹಾಪಂಡಿತ 1867-77ರ ಅವಧಿಯಲ್ಲಿ ಉಳಿದ ಸಂಪುಟಗಳನ್ನು ಪರಿಶೀಲಿಸಿ ಪ್ರಕಟಿಸಿದ. ಇದರ ರಚನೆಗೆ 200 ಚರಿತ್ರಕಾರರನ್ನು ಆರಿಸಲಾಗಿದೆ. ಸುಮಾರು 143 ಐತಿಹಾಸಿಕ ಗ್ರಂಥಗಳಿಂದ ವಿವರಣೆಗಳನ್ನು ಆಯಲಾಗಿದೆ. ಇದರ ಪರಿಷ್ಕರಣ ಮಾಡುವಾಗ ಡೌಸನ್ ಇದ್ದ ವಸ್ತುವಿನ ಜೊತೆಗೆ ಅನೇಕ ಪ್ರಾಂತೀಯ ದಾಖಲೆಗಳು, ಜೀವನಚರಿತ್ರೆಗಳು, ಕಾಗದ ಪತ್ರಗಳೂ, ಐತಿಹಾಸಿಕ ಪ್ರಾಮುಖ್ಯವುಳ್ಳ ಭೌಗೋಳಿಕ ವಿಷಯಗಳು - ಮುಂತಾದುವನ್ನು ಸಂಗ್ರಹಿಸಿ ಸೇರಿಸಿದ್ದಾನೆ. ಹೀಗೆ ಶೇಖರಗೊಂಡ ಹಸ್ತಪತ್ರಿಕೆಗಳ ಸಂಖ್ಯೆ ಸುಮಾರು 421. ಇವುಗಳಲ್ಲಿ ಹೆಚ್ಚಿನವು ಪಾರಸಿ ಭಾಷೆಯಲ್ಲಿವೆ.

ಡೌಸನ್ ಈ ಗ್ರಂಥವನ್ನಲ್ಲದೆ ಕ್ಲ್ಯಾಸಿಕಲ್ ಡಿಕ್ಷನರಿ ಆಫ್ ಹಿಂದೂ ಮೈಥಾಲಜಿ ಅಂಡ್ ರಿಲಿಜನ್, ಜಾಗ್ರಫಿ, ಹಿಸ್ಟರಿ ಅಂಡ್ ಲಿಟರೆಚರ್ ಎಂಬ ಭಾರತ ಪುರಾಣೇತಿಹಾಸ ಸಂಬಂಧವಾದ ನಿಘಂಟೊಂದನ್ನೂ ಬರೆದಿದ್ದಾನೆ.	(ಎಸ್.ಎಂ.ಎಚ್.; ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ